ನಿಜವಾದ ಮಾತಾ ಅಮೃತಾನಂದಮಯಿ

ಕೆಲವರು ಹೇಳುತ್ತಾರೆ ಮಾತಾ ಅಮೃತಾನಂದಮಯಿ ಪವಾಡ ಮಾಡಿದ್ದಾರೆ ಎಂದು. ಕೆಲವರು ಹೇಳುತ್ತಾರೆ ಅದೆಲ್ಲಾ ದಂತಕಥೆಗಳು ಮಾತ್ರ ಎಂದು. ಆದರೆ ಅಮ್ಮನ ಜೀವನವು ಮಾನವತೆಗಾಗಿ ಮೀಸಲಾಗಿದೆ ಎನ್ನುವ ಮಾತನ್ನು ಮಾತ್ರ ಯಾರೂ ತಳ್ಳಿಹಾಕಲಾರರು. ಹದಿನೈದು, ಇಪ್ಪತ್ತು ತಾಸು – ಕೆಲವು ಸಲ ಇಪ್ಪತ್ತನಾಲ್ಕು ತಾಸುಗಳಿಗೂ ಅಧಿಕ, ಇನ್ನೊಬ್ಬರ ಕಣ್ಣೀರು ಒರೆಸುವಾ, ಇನ್ನೊಬ್ಬ ವ್ಯಕ್ತಿಗೆ ಆಲಿಂಗನ ಸಾಂತ್ವನ ನೀಡುವಾ, ಇನ್ನೊಬ್ಬ ದುಃಖಿಯ ಮುಖದಲ್ಲಿ ಮುಗುಳ್ನಗೆ ಮೂಡಿಸುವಾ ಎಂದು ತಮ್ಮ ಎಲ್ಲಾ ಶಾರೀರಕ ಅಗತ್ಯತೆಗಳನ್ನು ಅಲಕ್ಷಿಸಿ ಅಮ್ಮ ಕುಳಿತಿರುತ್ತಾರೆ. ತಮಗಾಗಿ ಒಂದು ನಿಮಿಷ ಎಂದಾಗಲೀ, ಬದಲಿಗೆ ಏನಾದರೂ ಸುಖವನ್ನು ಪಡೆಯುವುದಾಗಲೀ, ತಮಗಾಗಿ ಏನೇನೂ ಬಯಸದೆ ಪ್ರತಿ ಗಂಟೆ, ಪ್ರತಿ ದಿನ, ವಾರಗಟ್ಟಲೆ, ಮಾಸಗಟ್ಟಲೆ ವರ್ಷದಿಂದ ವರ್ಷಕ್ಕೆ, ಒಂದು ದಿನವೂ ರಜೆ ಎಂಬುದಿಲ್ಲದೆ, ಅಮ್ಮ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಮಾನವತೆಯ ಸೇವೆಯಲ್ಲಿ ನಿರತರಾಗಿದ್ದಾರೆ. ನನ್ನ ಪಾಲಿಗೆ ಇಷ್ಟು ಮಾತ್ರವೇ ಒಂದು ಅದ್ಭುತ ಪವಾಡವಾಗಿದೆ. ಪ್ರಪಂಚದಲ್ಲಿ ಯಾರಾದರೂ ತಮ್ಮ ಬಳಿಗೆ ಬರುವ ಯಾರನ್ನಾದರೂ – ಎಲ್ಲರನ್ನೂ ಸಹ – ಹೀಗೆ ತಬ್ಬಿಕೊಂಡಿದ್ದು ಇದೆಯೆ? ಅಮ್ಮ ಮಾಡಿರುವ ಮತ್ತೆಲ್ಲ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೂ, ಈ ಒಂದು ವಾಸ್ತವತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ.

“ಅಮ್ಮನ ಜೀವನವು ಮಾನವತೆಗಾಗಿ ಮೀಸಲಾಗಿದೆ ಎನ್ನುವ ಮಾತನ್ನು ಮಾತ್ರ ಯಾರೂ ತಳ್ಳಿಹಾಕಲಾರರು. ಹದಿನೈದು, ಇಪ್ಪತ್ತು ತಾಸು, ಕೆಲವು ಸಲ ಇಪ್ಪತ್ತನಾಲ್ಕು ತಾಸುಗಳಿಗೂ ಅಧಿಕ, ಇನ್ನೊಬ್ಬರ ಕಣ್ಣೀರು ಒರೆಸುವಾ, ಮುಗುಳ್ನಗೆ ಮೂಡಿಸುವಾ ಎಂದು ತಮ್ಮ ಎಲ್ಲಾ ಶಾರೀರಕ ಅಗತ್ಯತೆಗಳನ್ನು ಅಲಕ್ಷಿಸಿ ಅಮ್ಮ ಕುಳಿತಿರುತ್ತಾರೆ.”

ಅಮೃತಪುರಿಯಲ್ಲಿ, ಅಮ್ಮ ಸಾಮಾನ್ಯವಾಗಿ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ದರ್ಶನದ ಹಾಲಿಗೆ ಬರುತ್ತಾರೆ. ಬಂದ ಕೂಡಲೆ ದರ್ಶನ ನೀಡತೊಡಗುತ್ತಾರೆ. ಎಲ್ಲಾ ತರದ ಜನರೂ, ಎಲ್ಲಾ ದೇಶಗಳಿಂದ, ಎಲ್ಲಾ ವಯೋಮಾನದವರು, ಎಲ್ಲಾ ಸಂಸ್ಕಾರದವರೂ, ಎಲ್ಲಾ ಮತದವರೂ ಮತ್ತೆ ವಿವಿಧ ಆರ್ಥಿಕ ಹಿನ್ನೆಲೆಯವರೂ ಅಮ್ಮನ ಬಳಿಗೆ ಬರುತ್ತಾರೆ. ಬಳಿಗೆ ಬಂದವರು ನೊಬೆಲ್ ಪಾರಿತೋಷಕ ಪಡೆದವರಾಗಿರಲಿ, ಅಥವಾ ಗ್ರಾಮೀ ಅವಾರ್ಡ್ ಪಡೆದ ಸಂಗೀತಜ್ಞರಾಗಿರಲಿ, ರಾಜಕೀಯ ಧುರೀಣರಾಗಿರಲಿ, ೮೦ ವರ್ಷದ ವೃದ್ಧರಾಗಿರಲಿ, ಎರಡು ವರ್ಷದ ಮಗುವಾಗಿರಲಿ, ಕಡುಬಡವನಾಗಿರಲಿ, ಕುಷ್ಠರೋಗಿಯೇ ಆಗಿರಲಿ – ಅವರ ಹಂತಕ್ಕೆ ಹೋಗಿ, ಮಿಡಿದು, ಅವರೊಂದಿಗೆ ಸಂವಾದ ನಡೆಸಲು ಅಮ್ಮನಿಗೆ ಸಾಧ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಅಮ್ಮನ ಕರುಣೆಯನ್ನು, ಪೂರ್ಣಗಮನವನ್ನೂ ಮತ್ತು ಮಾತೃಪ್ರೇಮವನ್ನು ತಪ್ಪದೇ ಪಡೆಯುತ್ತಾರೆ.

ಅಮ್ಮ ಜನರನ್ನು ಕೇವಲ ಶಾರೀರಕವಾಗಿ ಆಲಂಗಿಸುವುದು ಮಾತ್ರವಲ್ಲ. ಅವರ ದೈನಂದಿನ ಸಮಸ್ಯೆಗಳನ್ನೂ ಆಲಿಸುತ್ತಾರೆ; ಅವರ ಆಧ್ಯಾತ್ಮಿಕ ಸಮಸ್ಯೆಯನ್ನೂ ಆಲಿಸಿ, ಸಂಶಯ ನಿವಾರಿಸಿ, ಮಾರ್ಗದರ್ಶನ ನೀಡುತ್ತಾರೆ. ಇದು ದರ್ಶನ ಸಾಲಿನಲ್ಲಿ ಬರುವ ಜನರ ವಿಷಯ ಮಾತ್ರವಲ್ಲ, ಅಮ್ಮನ ಎಡಕ್ಕೂ ಬಲಕ್ಕೂ ಜನರ ಬೇರೆ ಸಾಲುಗಳೂ ಇವೆ. ಅದು ಆಶ್ರಮವಾಸಿಗಳ, ಶಿಷ್ಯರ, ಅಮ್ಮನ ವಿವಿಧ ಶೈಕ್ಷಣೆಕ ಹಾಗೂ ಮಾನವ ಸೇವಾ ಯೋಜನೆಗಳನ್ನು ನಡೆಸುವ ಭಕ್ತ ಸೇವಾವ್ರತಿಗಳ ಸಾಲು, ಅವರಿಗೂ ಅಮ್ಮನನ್ನು ಕೇಳಬೇಕಾದ ಪ್ರಶ್ನೆಗಳಿರುತ್ತವೆ. ಅಮ್ಮನ ಅಕ್ಕಪಕ್ಕದಲ್ಲಿ ಅಮ್ಮನೊಂದಿಗೆ ನಿಜವಾದ ಮೀಟಿಂಗ್ ಗಳು ನಡೆಯುವುದು ಸರ್ವೇ ಸಾಮಾನ್ಯ; ಆಗಲೂ ದರ್ಶನ ಮುಂದುವರೆದಿರುತ್ತದೆ! ಅಮ್ಮ ಮೀಟಿಂಗ್ ನಲ್ಲೂ ಪೂರ್ಣವಾಗಿ ಭಾಗವಹಿಸುತ್ತಿರುತ್ತಾರೆ. ಆಧ್ಯಾತ್ಮವಿರಲಿ, ಅರ್ಥಶಾಸ್ತ್ರವಿರಲಿ, ಮನೋವಿಜ್ಙಾನವಿರಲಿ, ವೈದ್ಯಕೀಯ ಶಾಸ್ತ್ರ ಇರಲಿ, ಬಯೋ ಟೆಕ್ನಾಲಜಿಯೇ ಇರಲಿ, ಕಂಪ್ಯೂಟರ್ ಸೈನ್ಸ್ ಇರಲಿ, ಅಥವಾ ಹದಿಹರೆಯದವರ ಮುರಿದ ಪ್ರಣಯದ ಸಮಸ್ಯೆಯೇ ಆಗಿರಲಿ – ಯಾವುದೇ ಟಾಪಿಕ್ ಬಗ್ಗೆ ಬಹು ಚಾಣಕ್ಷತನದಿಂದ ಅಮ್ಮ ಚರ್ಚೆ ಮಾಡಬಲ್ಲರು. ಅಮ್ಮ ವಾಸ್ತವವಾಗಿ ಪಡೆದಿರುವುದು ಕೇವಲ ನಾಲ್ಕನೆ ತರಗತಿಯವರೆಗಿನ ಶಿಕ್ಷಣ ಎಂದು ದಯವಿಟ್ಟು ಮರೆಯದಿರಿ.

ಇದು ಅಮ್ಮನ ಹತ್ತಿರ ನಡೆಯುವ ಮೀಟಿಂಗ್; ಇನ್ನು ದೂರದಿಂದ ನಡೆಯುವ ಮೀಟಿಂಗ್ ಗಳೂ ಇವೆ. ಸೇವಾ ಯೋಜನೆಗಳ ಪ್ರಾಜೆಕ್ಟ್ ಮ್ಯಾನೇಜರ್ ಮಕ್ಕಳು ದೂರದೂರುಗಳಿಂದ ಅಮ್ಮನ ನಿರ್ದೇಶನ ಬಯಸಿ ಫೋನಿನಲ್ಲಿ ಕರೆಮಾಡುವರು. ಹುಷಾರಿಲ್ಲದ ಭಕ್ತರು, ಆಸ್ಪತ್ರೆಯಲ್ಲಿರುವ ಭಕ್ತರು, ಮತ್ತಿತರರು ಕರೆಮಾಡುತ್ತಾರೆ. ಅಮ್ಮ ಇವರೊಂದಿಗೂ ಫೋನಿನಲ್ಲಿ ಮಾತಾಡುತ್ತಾರೆ; ಎದುರಿನಿಂದ ಬರುವ ದರ್ಶನಾರ್ಥಿಗೆ ತಮ್ಮ ಗಮನ ಕಡಿಮೆಯಾಗಬಾರದೆಂದು ಅಮ್ಮ, ಫೋನಿನಲ್ಲಿ ಮಾತಾಡುವಾಗ ಸ್ವಲ್ಪ ತಡೆಯುತ್ತಾರೆ. ಪ್ರತಿಯೊಬ್ಬ ದರ್ಶನಾರ್ಥಿಗೆ ಅಮ್ಮ ಕಿವಿಯಲ್ಲಿ ಪಿಸುಮಾತು ನುಡಿಯುತ್ತಾರೆ, ಅವರ ಸಮಸ್ಯೆಯನ್ನು ಆಲಿಸುತ್ತಾರೆ, ಅವರ ಕಣ್ಣೀರು ಒರೆಸುತ್ತಾರೆ. ಹೀಗೆ ಅಮ್ಮ ಎಲ್ಲಾ ದಿಕ್ಕಿನಲ್ಲೂ ತಿರುಗಿ, ಕತ್ತುಹೊರಳಿಸಿ, ಪ್ರಪಂಚದ ಸೇವೆಗೆ ತಮ್ಮನ್ನೇ ಅರ್ಪಿಸಿಕೊಳ್ಳುತ್ತಿರುವರು – ಇದನ್ನು ಕಣ್ಣಾರೆ ನೋಡುವುದೂ ಒಂದು ಅನುಭವವೆ.

ಆಮೇಲೆ ಅನ್ನಪ್ರಾಶನದ ಸರದಿ. ಅಮ್ಮನ ಕೈಯಿಂದ ಎಳೇಮಕ್ಕಳಿಗೆ ಮೊದಲ ಸಲ ಅನ್ನ ತಿನ್ನಿಸುವ ಆಚಾರ. ಇದಾದ ಮೇಲೆ ವಿದ್ಯಾರಂಭ; ಅಮ್ಮನಿಂದ ಮಕ್ಕಳಿಗೆ ಅಕ್ಷರಾಭ್ಯಾಸದ ಆರಂಭ. ನಿತ್ಯವೂ ಡಜನ್ ಗಟ್ಟಲೆ ಮಕ್ಕಳು ಇವೆಲ್ಲಕ್ಕಾಗಿ ಅಮ್ಮನ ಬಳಿ ಬರುತ್ತಾರೆ. ಬ್ರಾಹ್ಮಣ ಕುಟುಂಬದ ಮಕ್ಕಳಿಗೆ ಅಮ್ಮ ಉಪನಯನ ಸಂಸ್ಕಾರವನ್ನೂ ನೆರವೇರಿಸುತ್ತಾರೆ; ಯಜ್ಞೋಪವೀತ ಹಾಕಿ, ಗಾಯತ್ರೀ ಮಂತ್ರ ಬೋಧಿಸಿ, ದೀಕ್ಷೆ ಕೊಡುತ್ತಾರೆ. ಕ್ರಿಶ್ಚಿಯನ್ ಭಕ್ತರು ಬಿನ್ನವಿಸಿಕೊಂಡಾಗ ಅಮ್ಮ ಅವರ ಮಕ್ಕಳಿಗೆ ಬ್ಯಾಪ್ಟಿಸಮ್ ಸಹ ಮಾಡುತ್ತಾರೆ. ಇದಲ್ಲದೆ ಯಾರು ಕೇಳಿದರೂ ಅವರಿಗೆಲ್ಲಾ ಅಮ್ಮ ಮಂತ್ರ ನೀಡುತ್ತಾರೆ. ಈ ಮಂತ್ರಗಳು ಹಿಂದೂ ಮಂತ್ರವೇ ಆಗಿರುವುದೆಂದಿಲ್ಲ. ಹಿಂದೂ ದೇವ ದೇವಿಯರ ಮಂತ್ರ ಕೇಳುವವರಿದ್ದಾರೆ; ಅದೇ ರೀತಿ ಭಗವಾನ್ ಬುದ್ಧ, ಅಲ್ಲಾಹು, ಯೇಸು ಕ್ರಿಸ್ತ, ವರ್ಜಿನ್ ಮೇರಿಯ ಆರಾಧಕರು, ಅವರವರ ಇಷ್ಟದೈವದ ಮಂತ್ರ ಕೇಳಿ ಪಡೆಯುತ್ತಾರೆ. ಅಮ್ಮ ಜೈನ ಮಂತ್ರ ಪ್ರದಾನ ಮಾಡುತ್ತಾರೆ, ಯಹೂದಿ ಮಂತ್ರ ಪ್ರದಾನ ಮಾಡುತ್ತಾರೆ, ಸಿಖ್ಖರ ಮಂತ್ರ ಪ್ರದಾನ ಮಾಡುತ್ತಾರೆ ಭಗವಂತನ ನಿರಾಕಾರ ಸ್ವರೂಪದ ಮೇಲಿನ ಮಂತ್ರ ಬೇಕೆಂದು ಕೇಳುವವರೂ ಇದ್ದಾರೆ. ಪ್ರೇಮ, ಕರುಣೆ, ಪ್ರಕಾಶ – ಇಂಥ ಗುಣಗಳ ಮಂತ್ರ ಬೇಕೆನ್ನುವವರಿದ್ದಾರೆ. ಅಮ್ಮ ಯಾರನ್ನೂ ಯಾವುದೇ ದೇವತೆಯನ್ನು ಆಧಾರವಾಗಿಸಿ ಮಂತ್ರವನ್ನು ತೆಗೆದುಕೊಳ್ಳಬೇಕು ಎಂದು ಬಲವಂತ ಪಡಿಸುವುದಿಲ್ಲ.

(ಓದುಗರ ಗಮನಕ್ಕೆ: ಅಮ್ಮನದು ಅತ್ಯಂತ ವಿಶಾಲವಾದ ದೃಷ್ಟಿ. ಎಲ್ಲವನ್ನೂ ಒಳಗುಮಾಡಿಕೊಂಡಂಥ ದೃಷ್ಟಿ. ಅಮೃತಪುರಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಹಾಗೆ ಕ್ರಿಸ್ಮಸ್ ಸಹ ದೊಡ್ಡ ಹಬ್ಬ. ಇಂದಿನ ದಿನ ಇಲ್ಲಿನ ಹಾಗೆ ಬೇರೆ ಬೇರೆ ಸಂಸ್ಕಾರದ ಹಬ್ಬಗಳನ್ನು ಆಚರಿಸುವಂತ ಧಾರ್ಮಿಕ ಸಂಸ್ಥೆಗಳನ್ನು ಕಾಣುವುದು ಅಪರೂಪ. ಗಜರಾತಿನಲ್ಲಿ ೨೦೦೧ರಲ್ಲಿ ಭೂಕಂಪವಾದಾಗ, ಮಾತಾ ಅಮೃತಾನಂದಮಯಿ ಮಠವು ಭುಜ್ ಜೆಲ್ಲೆಯಲ್ಲಿ ಮೂರು ಹಳ್ಳಿಗಳನ್ನು ಪುನರ್ನಿರ್ಮಾಣ ಮಾಡಿಕೊಟ್ಟಿತು; ಆ ಸಂದರ್ಭದಲ್ಲಿ ಅಮ್ಮ ಒಂದು ಮಸೀದಿಯನ್ನೂ ನಿರ್ಮಿಸಿಕೊಟ್ಟರು; ಒಂದು ಚರ್ಚ್ ಕಟ್ಟಿಸಿಕೊಡಲು ಮುಂದೆಬಂದಿದ್ದರು.)

ಇದೆಲ್ಲಾ ನಡೆದಿರುವಾಗಲೂ ದರ್ಶನ ಮುಂದುವರಿದಿರುತ್ತದೆ. ಊಟದ ಸಮಯವಾಗಿ ಅದೂ ಮೀರುತ್ತದೆ; ಅಮ್ಮ ಊಟ ಮಾಡುವುದಿಲ್ಲ. ರಾತ್ರಿ ಊಟದ ಸಮಯವಾಗುತ್ತದೆ; ಆಗಲೂ ಅಮ್ಮ ಊಟ ಮಾಡುವುದಿಲ್ಲ. ಅಮ್ಮ ಕುಳಿತಲ್ಲಿಂದ ಏಳುವುದೇ ಇಲ್ಲ. ಕುಳಿತಲ್ಲೇ ಕುಳಿತು, ಒಬ್ಬರಾದ ಮೇಲೆ ಒಬ್ಬರನ್ನು ತಮ್ಮ ನಿಜಬಾಹುಗಳಲ್ಲಿ ಸ್ವೀಕರಿಸುತ್ತಾ ಇರುತ್ತಾರೆ. ಅಮ್ಮನ ಶಕ್ತಿಯಾಗಲೀ, ಸಹನಾಶಕ್ತಿಯಾಗಲೀ ಒಂದಿಷ್ಟೂ ಕಡಿಮೆಯಾಗುವುದಿಲ್ಲ. ವೇದಿಕೆಗೆ ಬಂದಾಗ ಯಾವ ರೀತಿ ಫ್ರೆಶ್ಶಾಗಿ ಹೊಳೆಯುತ್ತಿದ್ದರೋ ಅದೇ ರೀತಿ ಹದಿನೈದು ತಾಸು ದರ್ಶನ ನೀಡಿದ ಬಳಿಕವೂ ಫ್ರೆಶ್ಶಾಗಿ ಹೊಳೆಯುತ್ತಿರುತ್ತಾರೆ. ಬಂದವರೆಲ್ಲರನ್ನೂ ಕಂಡು ಅವರೆಲ್ಲರಿಗೂ ಅಪ್ಪುಗೆ ನೀಡಿ, ಅವರನ್ನು ಮಾತಾಡಿಸಿದಮೇಲೇ ಅಮ್ಮ ದರ್ಶನ ನಿಲ್ಲಿಸುವುದು. ಅಲ್ಲಿಯವರೆಗೂ ಅಮ್ಮ ಸಮಯವನ್ನೇ ಜಗ್ಗೀ ಜಗ್ಗೀ ಹಿಗ್ಗಿಸುತ್ತಾರೆ; ಪ್ರತಿಯೊಬ್ಬ ವ್ಯಕ್ತಿಗೆ ತಮ್ಮಿಂದ ಆದಷ್ಟೂ ಗಮನ ನೀಡುತ್ತಿರುತ್ತಾರೆ. ಅನೇಕ ಸಲ ದರ್ಶನ ಮುಗಿಸುವ ಹೊತ್ತಿಗೆ ಅಮ್ಮ ಯಾರನ್ನಾದರೂ ಕರೆದು, ‘ಹೋಗಿ ಹಾಲಿನಲ್ಲೆಲ್ಲಾ ಹುಡುಕು, ದರ್ಶನ ಸಿಕ್ಕಿಲ್ಲದವರು ಇರಬಹುದು,’ ಎಂದು ಕಳಿಸುತ್ತಾರೆ.

ಹದಿನೈದು ತಾಸಿಗೂ ಹೆಚ್ಚಿನ ಸಮಯದ ನಂತರ, ಅಂತೂ ದರ್ಶನ ಮುಗಿದ ಮೇಲೆ, ಅಮ್ಮ ಕುಳಿತಲ್ಲಿಂದ ಏಳುತ್ತಾರೆ. ೧೯೮೩ರಿಂದ ವಾಸವಿರುವ ಅದೇ ಒಂದು ಪುಟ್ಟ ಕೋಣೆಗೆ ಹೆಜ್ಜೆಹಾಕುತಾ ತೆರಳುತ್ತಾರೆ. ಕೋಣೆಗೆ ಹೋಗಿ ಅಮ್ಮನೇನೊ ಮಲಗುವುದಿಲ್ಲ. ಅಮ್ಮನ ಕೋಣೆಯ ದೀಪ ಉರಿಯುತ್ತಿರುವುದನ್ನು ಯಾರು ಬೇಕಾದರೂ ನೋಡಬಹುದು. ಅಮ್ಮ ಫೋನಿನಲ್ಲಿ ಮಾತಾಡುತ್ತಿರುತ್ತಾರೆ. ಆಶ್ರಮದ ಯಾವುದಾದರೂ ಸೇವಾಯೋಜನೆಯ ವಿವರಗಳ ಬಗ್ಗೆ: ದುರಂತ ಪರಿಹಾರ ಕೆಲಸವಿರಬಹುದು, ನಿರ್ಗತಿಕರಿಗೆ ಮನೆ ನಿರ್ಮಾಣ ಯೋಜನೆ ಇರಬಹುದು, ಬಡ ಮಹಿಳೆಯರಿಗೆ, ವೃದ್ಧರಿಗೆ, ವಿಕಲಚೇತನರಿಗೆ ನೀಡುವ ಪೆನ್ಷನ್ ಯೋಜನೆಯ ಬಗ್ಗೆ ಇರಬಹುದು, ಅನಾಥಾಶ್ರಮದ ಬಗ್ಗೆ ಇರಬಹುದು, ಉಚಿತ ವೈದ್ಯಕೀಯ ಸೇವೆಗಳ ಬಗ್ಗೆ ಇರಬಹುದು, ಸ್ಕಾಲರ್ಶಿಪ್ ಯೋಜನೆಯ ಬಗ್ಗೆ ಇರಬಹುದು, ಪ್ರಕೃತಿ ಸಂರಕ್ಷಣಾ ಯೋಜನೆಯ ಬಗ್ಗೆಯೂ ಇರಬಹುದು…. ಇದಲ್ಲದೆ ಅಮ್ಮ ಓದಬೇಕಾದ ಅನೇಕಾನೇಕ ಪತ್ರಗಳು ಕಾದಿರುತ್ತವೆ. ಪೋಸ್ಟ್ ಆಫೀಸಿನ ಮೂಲಕ ಬಂದವು, ಈ ಮೇಲ್ ಮೂಲಕ ಬಂದವು, ಅಮ್ಮನ ವೆಬ್ ಮೂಲಕ ಬಂದವು, ದರ್ಶನ ಸಮಯದಲ್ಲಿ ಅಮ್ಮನ ಕೈಗೆ ಭಕ್ತರು ನೇರವಾಗಿ ಕೊಟ್ಟ ಪತ್ರಗಳು, ದೂರದ ಭಕ್ತರು ಅಮ್ಮನಿಗೆಂದು ಕಳಿಸಿಕೊಟ್ಟ ಪತ್ರಗಳು, ಅಮೃತಾ ಯೂನಿವರ್ಸಿಟಿ ವಿದ್ಯಾರ್ಥಿಗಳ ಪತ್ರಗಳು, ಶಿಕ್ಷಕವರ್ಗದವರ ಪತ್ರಗಳು, ಶಿಷ್ಯರ ಪತ್ರಗಳು, ಭಕ್ತರ ಪತ್ರಗಳು…. ಅಮ್ಮ ಪ್ರತೀ ದಿನ ಎಷ್ಟು ಹೆಚ್ಚಿಗೆ ಓದಲು ಸಾಧ್ಯವೋ ಅಷ್ಟು ಪತ್ರಗಳನ್ನು ಓದುತ್ತಾರೆ. ಅಮ್ಮನ ಪರಿಚಾರಕಿ ಹೇಳುವ ಪ್ರಕಾರ ಅಮ್ಮ ಹಲ್ಲುಜ್ಜುವಾಗಲೂ ಸಹ ಪತ್ರಗಳನ್ನು ಓದುತ್ತಿರುತ್ತಾರಂತೆ.

ಇದರ ನಡುವೆ ಅಮ್ಮ ಹೇಗೋ ಸಮಯ ಹೊಂದಿಸಿಕೊಂಡು ಹೊಸಹೊಸಾ ಭಜನೆಗಳನ್ನು ಪ್ರಾಕ್ಟೀಸ್ ಮಾಡುತ್ತಾರೆ; ಈಚಿನ ದಿನಗಳಲ್ಲಿ ಅಮ್ಮನ ಮಾತೃಭಾಷೆ ಮಲಯಾಳಂ ಅಲ್ಲದೆ ಬೇರೆ ಬೇರೆ ಹಲವಾರು ಭಾಷೆಗಳಲ್ಲಿ ಭಜನೆಗಳು ರಚಿತವಾಗುತ್ತಿವೆ. ಆಯಾ ಭಾಷೆಯ ಭಕ್ತರ ಮನಸ್ಸಿಗೆ ಸಂತೋಷವಾಗುವುದೆಂದು ಅಮ್ಮ ತಮ್ಮ ಬಿಡುವಿಲ್ಲದ ಶೆಡ್ಯೂಲ್ ನ ನಡುವೆಯೇ ಕೆಲವಾರು ನಿಮಿಷ ಬಿಡುವು ಮಾಡಿಕೊಂಡು, ಪರಭಾಷೆಯ ಉಚ್ಚಾರವನ್ನು ಪರಿಶ್ರಮದಿಂದ ಕಲಿತು ಸ್ಫುಟವಾಗಿ ಹಾಡುತ್ತಾರೆ..

ವಿದೇಶಗಳಲ್ಲಿ ಯಾತ್ರೆ ಮಾಡುವಾಗ ಅಮ್ಮನ ವಸತಿ ಬಹು ಸರಳ. ಅನೇಕ ಸಲ ಪ್ರೋಗ್ರಾಮ್ ನಡೆಯುವ ಹಾಲಿನ ಬೇಸ್ ಮೆಂಟ್ ಫ್ಲೋರಿನಲ್ಲೇ ಒಂದು ಸಣ್ಣ ಲಾಕರ್ ರೂಮಿನಲ್ಲಿ, ಕಿಟಕಿಯಾಗಲೀ ಯಾವುದೇ ರೀತಿಯ ಗಾಳಿ ಸಂಚಾರವಾಗಲೀ ಇಲ್ಲದಂಥ ಕಡೆ, ಅಮ್ಮನ ವಿಶ್ರಾಂತಿಯ ನೆಲೆಯಾಗಿರುತ್ತದೆ. ಯಾಕೆ? ಯಾಕೆಂದರೆ ಕಾರ್ಯಕ್ರಮದ ಸ್ಥಳದಿಂದ ಭಕ್ತರ ಮನೆಗೆ ಹೋಗಿಬರುವ ಸಮಯವಿದೆಯಲ್ಲಾ – ಆ ಸಮಯವನ್ನು ಕೂಡ ಉಳಿಸಿದ್ದಲ್ಲಿ, ಅಮ್ಮ ಇನ್ನಷ್ಟು ಭಕ್ತರಿಗೆ ದರ್ಶನವನ್ನಾದರೂ ನೀಡಬಹುದಲ್ಲಾ ಎಂಬ ಭಾವದಿಂದಾಗಿ! ಅನೇಕ ಬಾರಿ ಅಮೇರಿಕೆಯಲ್ಲಿ ಆಗುವಂತೆ ಅಮ್ಮನ ಕಾರ್ಯಕ್ರಮಗಳು ನಡೆಯುವುದು ಒಳ್ಳೆಯ ಹೊಟೇಲ್ಲಿನಲ್ಲಾದರೂ, ಅಲ್ಲಿಯೂ ಅಮ್ಮ ಅಮೃತಪುರಿಯಲ್ಲಿ ಮಾಡುವ ಹಾಗೆ ನೆಲದಮೇಲೇ ಮಲಗುತ್ತಾರೆ. ಅಮ್ಮನ ರೀತಿ ಎಂದಿಗೂ ಸರಳವಾದುದು.

ಅಂತೂ ಬಿಡುವಾಗಿ, ಕೊಂಚ ಸಮಯ ಇನ್ನು ಮಲಗಲು ಸಮಯವಾಯ್ತು ಎನ್ನುವಷ್ಟರಲ್ಲಿ, ಅದೋ ಸೂರ್ಯೋದಯ ಆಗಿಬಿಟ್ಟಿರುತ್ತದೆ! ಅಮ್ಮ ಮಲಗುವರಾ? ಅಮ್ಮನ ಪರಿಚಾರಿಕೆಯ ಪ್ರಕಾರ, ‘ಒಂದೆರಡು ತಾಸು ಮಲಗುವರು, ಆದರೆ ಅದೇನೂ ಗಾಢನಿದ್ರೆಯಲ್ಲ. ಸುಮ್ಮನೆ ಶರೀರಕ್ಕೆ ವಿಶ್ರಾಂತಿ ನೀಡುವ ಸಲುವಾಗಿ ಒರಗುತ್ತಾರೆ.’ ಹೀಗೆ ಕೆಲವು ತಾಸುಗಳ ನಂತರ ಅಮ್ಮ ಎದ್ದು, ಮತ್ತೆ ಇನ್ನಷ್ಟು ಪತ್ರಗಳನ್ನು ಓದುತ್ತಾರೆ, ಅಂದಿನ ದರ್ಶನಕ್ಕೆ ಸಿದ್ಧರಾಗುತ್ತಾರೆ. ಇನ್ನು ಯಾವುದೇ ಕ್ಷಣ ದರ್ಶನ ಪ್ರಾರಂಭವಾಗಬಹುದು.

ಅಮ್ಮನ ದರ್ಶನ ಹಿಂದಿನ ದಿನದಂತೆಯೇ ಅವ್ಯಾಹತವಾಗಿ ಸಾಗುತ್ತದೆ.

-ಸ್ನೇಹ

Source:The Real Mata Amritanandamayi

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s